
ಸಾವು- ಮರಣ-ಮೃತ್ಯು… ಎಂಬ ಹಲವು ಪದಗಳಲ್ಲಿ ಉಚ್ಚರಿಸುವ ನಾವುಗಳು ಅದರ ನಿಜವಾದ ಅರ್ಥ ಮತ್ತು ಮೌಲ್ಯಗಳನ್ನು ಮರೆತಿದ್ದೇವೆ ಅನಿಸುತ್ತದೆ. ಅದು ನಮ್ಮ ಮನುಷ್ಯ ಕುಲಕ್ಕೆ ಬಹುದೊಡ್ಡ ಪಾಠವನ್ನು ಕಲಿಸುವ ಅತ್ಯಲ್ಪ ಸಮಯದ ಸೂತ್ರವಾಗಿ ಉಜ್ವಲಿಸಿದೆ. ಮಾನವೀಯ ಮೌಲ್ಯಗಳು ಮರೆಯಾಗುತಿಹೆ ನಿಮಗೆ, ಅಷ್ಟೆ ಏಕೆ ಈ ಪ್ರಕೃತಿಯ ಮಡಿಲಲ್ಲಿ ಜನಿಸಿರುವ ಪ್ರತಿಯೊಂದು ಜೀವಿಗೂ ಕಟ್ಟಿಟ್ಟ ಬುತ್ತಿಯಾಗಿದೆ. ಆದರೆ ಎಲ್ಲಾ ವಸ್ತು-ಜೀವಿಗಳಿಗಿಂತ ಮನುಷ್ಯ ಎಂಬ ಜೀವಿಗೆ ಅದು ವಿಶೇಷ ಅರ್ಥವನು ಕಲ್ಪಿಸುತ್ತದೆ ನಾವು ಅದನ್ನು ಗಂಭಿರವಾಗಿ ತೆಗೆದುಕೊಂಡಿಲ್ಲ. “ಹೇ., ಬಂದ್ರೆ ಬರಲಿ ಬಿಡ್ರಿ? ಯಾವನ್ ಹೆದರುತ್ತಾನೆ ಅದಕ್ಕೆ..! ಸಾವಿಗೆ ಹೆದರಿ ಜೀವನ ನಡೆಸೋಕೆ ಆಗುತ್ತಾ.. ಎಲ್ಲರಿಗೂ ಬಂದ ಹಾಗೆ ನನಗೂ ಬರುತೆ ” ಅಂತ ಹೇಳುವ ಕಯಾಲಿ ನಮಗೆಲ್ಲ ಅಹಂನ ಮೂಲಕ ರೂಢಿಯಾಗಿದೆ.
ನಿಜ, ಸಾವು ಎಲ್ಲರಿಗೂ ಬರುತ್ತೆ, ಅದು ಎಲ್ಲಿ ಯಾವಾಗ ಯಾರ ಬಳಿ ಬರುತ್ತೆ, ಎಷ್ಟೊತ್ತಿಗೆ ಬರುತ್ತೆ ಅನ್ನುವುದು ಗೊತ್ತಿಲ್ಲ, ಒಟ್ಟಿನಲ್ಲಿ ಅದು ಬರುವುದು ಖಚಿತ. ಆ ಖಚಿತತೆ ನಮಗೆಲ್ಲ ತಿಳಿದಿದೆ, ಆದರೆ ಅದರ ನಿಜವಾದ ಮೌಲ್ಯ ಅರಿಯದೆ ಮನುಷ್ಯರಾದ ನಾವುಗಳು ಐಷಾರಾಮಿ ಜೀವನಕ್ಕಾಗಿ, ಮೋಸ, ಧಗ, ವಂಚನೆ, ಸುಳ್ಳು, ಅನೈತಿಕತೆ, ಅಕ್ರಮ, ಕೊಲೆ, ಅತ್ಯಾಚಾರ, ಮೋಹ, ಮಧ, ಮತ್ಸರ, ಕಾಮದ ಮೂಲಕ ಜೀವನದ ಅತ್ಯಮೂಲ್ಯ ಸಮಯವನ್ನು ಬೇಕಾಬಿಟ್ಟಿಯಾಗಿ ಹಣದ ದಾಹದಲ್ಲಿ ಮುಳುಗಿ ಅಂಧಕಾರದಲ್ಲಿ ಜೀವನ ಸಾಗಿಸುತ್ತಿದ್ದೇವೆ, ಸಾವು, ಮನೆಯಲ್ಲಿದ್ದಾಗ, ಹೊರಗಿನ ಪ್ರಪಂಚದಲ್ಲಿ ಸಂಚಾರ ಮಾಡುವಾಗ, ಮನರಂಜನೆ ಮಾಡುವಾಗ ಬರುತ್ತೊ ಯಾರಿಗೂ ಗೊತ್ತಿಲ್ಲ, ಆದರೆ ಅದು ಬರುವುದಂತು ನಿಜ. ಅದಕ್ಕೆ ಸಂಬಂಧಿಸಿದ ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಉದಾಹರಣೆಯಾಗಿ ನೀಡಲು ಇಷ್ಟ ಪಡುತ್ತೇನೆ,
ನಾನು ಆಗ ೨೬ ವರ್ಷದ ಯುವಕನೆನಿಸುತ್ತೆ, ಅಂದು ಶುಕ್ರವಾರ ಇಂದು ಹೇಗೆ ನಾನು ಅಂಬೇಡ್ಕರ್ ತತ್ವಗಳನ್ನು ಓದಿ ಪಾಲಿಸಿದರೂ ದೇವರನ್ನು ಆರಾಧಿಸುತ್ತಿದ್ದೆನೋ ಹಾಗೆಯೇ ಅಂದು ಕೂಡ ನಮ್ಮ ಮನೆಯಲ್ಲಿ ಸರಿ ಸುಮಾರು ೬-೩೦ ನಿಮಿಷವೆನಿಸುತ್ತೆ ದೇವರ ಪೋಟೋಗಳಿಗೆ ಪುಷ್ಪಾರ್ಚನೆ ಮಾಡಿ ದೀಪ-ಜ್ಯೋತಿಯ ಬೆಳಗಿಸಿ ಮಂಗಳಾರತಿ ಮಾಡಿ, ಸೈಬರ್ ಸೆಂಟರ್‌ಗೆ ಕೆಲಸ ಮಾಡಲು ಹೊರಡಿ ನಿಂತಿದ್ದೆ, ಆಗ ಮನೆಯಲ್ಲಿ ಅಪ್ಪ, ಅಮ್ಮ, ನಾನು ಅಷ್ಟೆ, ಅಪ್ಪ ನನ್ನನ್ನೇ ದಿಟ್ಟಿಸಿ ನೋಡಿ ತನ್ನ ಅನಾರೋಗ್ಯದ ಸಮಯದಲ್ಲಿದ್ದ ಕುಬ್ಜ ದೇಹದೊಂದಿಗೆಯೇ ಮೆಲ್ಲನೆಯ ಧನಿಯಲ್ಲಿ “ಹೇ ಹುಚ್ಚ ನನ್ಮಗನೆ ದೇವರು-ದೇವರು ಅಂತಿಯಾ, ಆ ದೇವರು ಏನ್
ಮಾಡುತ್ತೆಲೇ ?? ಅಂತ ಗೊಣಗುತ್ತಿದ್ದರು. ಆಗ ನನಗೆ ಬಿಸಿ ರಕ್ತದ ಮದವಿತ್ತು ಅನಿಸುತ್ತೆ
“ನಿನಗ್ಯಾಕೆ,, ನೀನಂತು ಪೂಜೆ ಮಾಡಲ್ಲ ಮಾಡೋರಿಗೂ ಬಿಡೊಲ್ಲ, ಅದಕ್ಕೆ ನಿನಗೆ ದೇವರು ಈ ಶಿಕ್ಷೆ ಕೊಟ್ಟಿದ್ದಾನೆ ಅಂದು ಹೊರಗಡೆ ನಮ್ಮ ಹಳೆಯ ಏರಿಯಾದ ಮನೆಯ ಮುಂಬಾಗಿಲಲ್ಲಿ ಬಿಟ್ಟಿದ್ದ ಚಪ್ಪಲಿಯ ಧರಿಸುತ್ತಿದ್ದೆ ಆಗ ಆಮ್ಮ ಹೊರಗಡೆ ಪಾತ್ರೆ ಉಜ್ಜುತ್ತಿದ್ದಳು, ಅಪ್ಪ ಒಳಗಡೆಯಿಂದ ಯಾರ ಜೊತೆಯಲ್ಲೋ ಮಾತಾಡುತ್ತ, “ನಾನು ಬರೋಲ್ಲ, ನನ್ನ ಮಗ ಸರ್ಕಾರಿ ಕೆಲಸ ತಗೊಳ್ಬೇಕು ಅಲ್ಲಿಯವರೆಗೂ ಬರಲ್ಲ ಹೋಗ್ರೋ ನೀವು,..,ನೀವ್ಯಾಕ್ ಬಂದ್ರಿ, ಲಲಿತ {ಅಮ್ಮನ ಹೆಸರು}..ಲಲಿತ ಬೇಗ ಬಾರೆ, ಈ ನನ್ ಮಕ್ಳು ಬರಲ್ಲ ಆಂದ್ರು ಬಿಡ್ತಿಲ್ಲ ನನ್ನ ಎಳಕೊಂಡು ಹೋಗ್ತಿದ್ದಾರೆ ಅಂದು ಜೋರಾಗಿ ಚೀರುತ್ತಿದ್ದರು. ಅಮ್ಮ ಭಯದಲ್ಲಿ ನನಗೆ ಎಲ್ಲಿ ಹೋಗಬೇಡ, ಇಲ್ಲೇ ಇರು ಅನ್ನುತಿತ್ತು, ನಾನು ಒಳಗಡೆ ಬಂದೆ, ಅಪ್ಪನ ಜೇವ ಮೆಲ್ಲಗೆ ತಣ್ಣಗಾಗುತ್ತ ಬರುತ್ತಿತ್ತು, “ಅಪ್ಪ ನನ್ನನ್ನೇ ನೋಡಿ ಇಬ್ಬರು ತಂಗಿಯರನ್ನು ಚೆನ್ನಾಗಿ ನೋಡಿಕೋ, ಅಮ್ಮನ ಜೊತೆಯಿರು ಎನ್ನುತ್ತಿದ್ದರು, ಅಮ್ಮ ನನಗೆ ನಿಮ್ಮ ಅಪ್ಪನ ಬಾಯಿಗೆ ನೀರು ಹಾಕು,..ಕೊನೆಯದಾಗಿ ಎಂದು ಅಳುತ್ತಿದ್ದಳು, ಆಗ ನನಗೆ ಏನ್ ಮಾಡಬೇಕು ಅರ್ಥವಾಗುತ್ತಿರಲಿಲ್ಲ ನಾನು ಅಪ್ಪನ ಮುಖ ಒತ್ತಿ ಹಿಡಿದು ಅಪ್ಪ-ಅಪ್ಪ ಎಂದು ಚೀರುತ್ತಿದ್ದೆ, ಅಪ್ಪ ಮಾತಾಡ್ಲೇ ಇಲ್ಲ ಅಪ್ಪನ ದೇಹ ಮಾತ್ರ ಸಂಪೂರ್ಣ ಜಡವಾಗಿ ತಣ್ಣಗಾಗಿತ್ತು. ಅಂದು ನನಗೆ ಎಂದು ಬರದ ಕಣ್ಣೀರು ದುಃಖಿಸಿ ದುಃಖಿಸಿ ಬರುತ್ತಿತ್ತು. ಅಪ್ಪ ಇನ್ನಿಲ್ಲವೆಂಬ ಸತ್ಯ ಇಂದಿಗೆ ೧೦ ವರ್ಷಗಳು ಕಳೆದವು ಅವರು ನಮಗಾಗಿ ನಮ್ಮ ಕುಟುಂಬಕ್ಕಾಗಿ ದುಡಿದ ಕ್ಷಣಗಳು ನಿಜಕ್ಕು ದಿಟ್ಟ ಹೆಜ್ಜೆಯಾಗಿಯೇ ಉಳಿದಿವೆ. ಇಂದು ಅವರ ನೆನಪನ್ನು ನಮ್ಮ ಮನೆಯಲ್ಲಿಯೇ ಮರೆತಿದ್ದೇವೆ, ಇನ್ನು ಅವರ ಜೋಡಿ ಕಳೆದ ಸ್ನೇಹಿತರು, ಸಮಾಜ ನೆನಪಿಟ್ಟುಕೊಳ್ಳುತ್ತದೆಯೆ..? ಇಲ್ಲವೇ ಇಲ್ಲ. ಏಕೆಂದರೆ ನನ್ನಪ್ಪನಿಗೆ ಸಾವಿನ ಮೌಲ್ಯ ತಿಳಿದಿಲ್ಲ ಅದಕ್ಕಾಗಿ ಅವರನ್ನು ಯಾರು ನೆನಪಿಟ್ಟುಕೊಂಡಿಲ್ಲ ನಾವಷ್ಟೇ ಹಾಗೋಮ್ಮೆ ಹಿಗೋಮ್ಮೆ ನೆನಪಿಸಬಹುದು.
ಇನ್ನು ಮೊನ್ನೆ ಒಂದು ತಿಂಗಳ ಹಿಂದೆ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ೨೭ ವರ್ಷದ ಬಾಣಂತಿ ಯುವತಿಯೊಬ್ಬಳು ಐಸಿಯುನಲ್ಲಿಯೇ ಉಸಿರು ಬಿಟ್ಟಳು, ಶವ ಅನಾಥವಾಗಿತ್ತು. ಆಕೆಯ ಬಂಧು ಬಳಗ ಕೆಳಗಡೆ ಜೀವ ಉಳಿಯುತ್ತೆ ಎಂಬ ಭರವಸೆಯಲ್ಲಿ ಅಳುತ್ತಿದ್ದರು, ನಾನು ಐಸಿಯುನಲ್ಲಿ ಹೋಗಿ ಸಂಬಂಧಿಸಿದ ವೈದ್ಯರನ್ನು ವಿಚಾರಿಸಿದಾಗ ಗೊತ್ತಾಗಿದ್ದು ಆಕೆಯ ದೇಹ ಅಲ್ಲಾಡುತ್ತಿದೆ ಎಂಬ ಸತ್ಯ. ಕೇವಲ ವೆಂಟಿಲೇಟರ್ ಮೂಲಕ ದೇಹ ಅಲ್ಲಾಡುತ್ತಿದೆ ಎಒಬ ಸತ್ಯವನ್ನು ಕುಟುಂಬದವರಿಗೆ ಹೇಳಿದಾಗ ರೋಧನೆ ಜಾಸ್ತಿಯಾಯ್ತು ಈಗ ಆಕೆಯ ನೆನಪು ಯಾರಿಗೂ ಇಲ್ಲ
ಇನ್ನು ನಮ್ಮ ತಂದೆಯ ಸಹೋದರಿ ಹೈವೆ ರಸ್ತೆಯಲ್ಲಿ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತದಲ್ಲಿ ಮರಣ ಹೊಂದಿದಳು ಸ್ವಂತ ಗಂಡನೇ ಆಕೆಯ ಮರೆತು ಮತ್ತೊಂದು ಮದುವೆಯಾದ?
ಹೀಗೆ ಹತ್ತು ಹಲವು ನಿದರ್ಶನಗಳು ನನಗೆ ಮತ್ತು ನಿಮಗೆ ಸಂಭವಿಸಿದೆ.ಅದರಲ್ಲಿರುವ ಸಾಮಾನ್ಯ ಗುಣವೆಂದರೆ ಸಾವು. ಈ ಸಾವು ನಮಗೆಲ್ಲರಿಗೂ ಒಂದೆ. ಅದನ್ನು ಅರಿತು ಮುನ್ನಡೆದರೆ ನಾವು ಸತ್ತರೂ ಅಜರಾಮರರಾಗಿ ಬಾಳುತ್ತೇವೆ. ಉದಾಹರಣೆ ಪುರಾಣಗಳ ಕಥೆಯಲ್ಲಿ ಬರುವ ಶಬರಿ, ಶ್ರೀರಾಮ, ಧರ್ಮರಾಯ, ಕಲಿಯುಗದಲ್ಲಿ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಸಾವಿತ್ರಿಬಾಯಿ ಪುಲೆ, ಅಂಬೇಡ್ಕರ್, ಗಾಂಧೀಜಿ, ಬಸವಣ್ಣ, ಸರ್ವಙ್ಞ, ಕನಕದಾಸರು, ಪುರಂದರದಾಸರು ಮತ್ತು ಈಗ ಪ್ರಸ್ತುತ ಅಣ್ಣಾವ್ರ ಮಗ ಪುನೀತ್ ರಾಜಕುಮಾರ್ ಹೀಗೆ ಹಲವು ಮಹಾನ್ ನಾಯಕರುಗಳು, ವಚನಕಾರರು, ಸಮಾಜ ಸುಧಾರಕರು, ಆದರ್ಶ ವಾದಿಗಳು ಈಗಲೂ ನಮ್ಮ ಕಣ್ಣಮುಂದೆ ಬರುವರು, ಮತ್ತು ಇಂದಿಗೂ ಎಂದಿಗೂ ಜೀವಂತವಾಗಿರುವರು. ಆದರೆ ನಮ್ಮ ಮನೆಯಲ್ಲಿಯೇ ನಮ್ಮ ಜೊತೆಯಲ್ಲಿಯೇ ಇದ್ದು ಜೀವನ ಕಳೆದ ನಮ್ಮ ತಾತ-ಮುತ್ತಾತರ ನೆನಪುಗಳು ಮಾತ್ರ ಶೂನ್ಯ. ಅದಕ್ಕಾಗಿಯೇ ಏನೋ ನಮ್ಮ ಮನೆಗಳಲ್ಲಿ ಪೂರ್ವಿಕರ ಪೋಟೋಗಳು ಅತ್ಯಲ್ಪವಾಗಿವೆ. ಹೀಗೆ ಆದರೆ ನಮ್ಮ ಮುಂದಿನ ಪೀಳಿಗೆಗೆ ನಮ್ಮಗಳ ಪೋಟೋ ಸಹ ಕಣ್ಮರೆಯಾಗುತ್ತವೆ ಅನಿಸುತ್ತೆ. ಕಾರಣ ನಮಗೆ ಸಾವಿನ ಅರಿವು ಇಲ್ಲದೆ ಈ ದೇಹವೆಂಬ ಮುರುಕಲು ಕಂಬದ ಮನೆಗೆ ಙ್ಞಾನ, ನಿಸ್ವಾರ್ಥ ಪ್ರೀತಿ, ವಿಶ್ವಾಸ, ಸ್ನೇಹ, ಆತ್ಮೀಯತೆ, ಸಹಾಯ ಮಾಡುವ ಮಾನವೀಯ ಮೌಲ್ಯಗಳು ಕಣ್ಮರೆಯಾಗಿವೆ, ಆದ್ದರಿಂದಲೆ ನಮ್ಮ ಮನೆಯ ಕುಟುಂಬದವರು ಮತ್ತು ನಾವುಗಳು ಸಾವಿನ ನಂತರ ಕಣ್ಮರೆಯಾಗುತ್ತಿದ್ದೇವೆ. ಸ್ನೇಹಿತರೆ ಕೊನೆಯದಾಗಿ ಹೇಳುವುದೇನೆಂದರೆ ಯಾರು ಇತರರಿಗಾಗಿ, ಇತರರಿಗೋಸ್ಕರ ತನ್ನನ್ನು ಅರ್ಪಿಸಿಕೊಂಡು, ಭೂಮಿ ಮೇಲೆ ಹುಟ್ಟಿದ್ದೇವೆ, ನನ್ನದು ಅಂತ ಏನಾದರೂ ಬಿಟ್ಟು ಹೋಗೋಣ ಅಂತ ಮನಸ್ಸು ಮಾಡಿ ಸಮಾಜಕ್ಕಾಗಿ ಬದುಕುತ್ತಾನೋ ಅವನು ಪ್ರಕೃತಿ, ಈ ಭೂಮಿ ಇರುವವರೆಗೂ ಚಿರಾಯು ಆಗಿರುತ್ತಾನೆ. ಇಲ್ಲಿದಿದ್ದರೆ ಕೇವಲ ಗಾಳಿಯಲ್ಲಿ ಮರೆಯಾಗಿ ಕೇವಲ ಚಿತಾಭಸ್ಮ, ಮೂಳೆಯಾಗಿ ದೊರೆಯುತ್ತಾನೆ, ಇದುವೆ ಮಾನವೀಯ ಮೌಲ್ಯದ ಈ ದಿನದ ಸೂಕ್ತಿ. ಧನ್ಯವಾದಗಳೊಂದಿಗೆ..
ಲೇಖನ : ಸೂರ್ಯಪ್ರಕಾಶ್.ಆರ್