Chithradurga

ನೋಂದಣಿಯಿಲ್ಲದೆ ಚಿಕಿತ್ಸೆ : ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಕೆ.ಪಿ.ಎಂ.ಇ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ

ಚಿತ್ರದುರ್ಗ: ಕೆ.ಪಿ.ಎಂ.ಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ) ಕಾಯ್ದೆ ಅನ್ವಯ ಖಾಸಗಿ ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂ, ಲ್ಯಾಬ್ಗಳು ನೋಂದಣಿ ಮಾಡಿ, ಪರವಾನಿಗೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿ ಇಲ್ಲದೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಜರುಗಿದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನೊಂದಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.ಆಯುಷ್ ಕ್ಲಿನಿಕ್ಗೆ ಪರವಾನಿಗೆ ಪಡೆದು, ಆಲೋಪತಿ ಚಿಕಿತ್ಸೆ ನೀಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ನೋಂದಣಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಪರವಾನಿಗೆ ಹಾಗೂ ಚಿಕಿತ್ಸಾ ದರಪಟ್ಟಿ ಪದ್ರರ್ಶನ ಕಡ್ಡಾಯ :ಖಾಸಗಿ ಆಸ್ಪತ್ರೆ, ಕ್ಲಿನಿಕ್, ಲ್ಯಾಬೋರೇಟರಿ, ರಕ್ತ ನಿಧಿ ಕೇಂದ್ರಗಳ ಮುಂದೆ ಕೆ.ಪಿ.ಎಂ.ಇ ಪರವಾನಿಗೆ ಪ್ರಮಾಣ ಪತ್ರ ಹಾಗೂ ಚಿಕಿತ್ಸಾ ದರಪಟ್ಟಿಯನ್ನು ಕಡ್ಡಾಯವಾಗಿ ಫಲಕದಲ್ಲಿ ಪ್ರದರ್ಶನ ಮಾಡಬೇಕು. ಅಲೋಪತಿ ನೊಂದಣಿ ಪರವಾನಿಗೆ ಫಲಕವು ಆಕಾಶ ನೀಲಿ ಹಾಗೂ ಆರ್ಯುವೇದ ನೊಂದಣಿ ಪರವಾನಿಗೆ ಫಲಕವನ್ನು ತಿಳಿ ಹಸಿರು ಬಣ್ಣದಲ್ಲಿಯೇ ಹಾಕಬೇಕು. ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರವೇಶ, ಪರಿಶೀಲನೆಗಾಗಿ ನೇಮಿಸಲಾದ ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ, ಕೆ.ಪಿ.ಎಂ.ಇ ಕಾಯ್ದೆ ಅನುಷ್ಠಾನದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳ ೨೦೦ ಮೀಟರ್ ಅಂತರದಲ್ಲಿ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳಿಗೆ ಅನುಮತಿ ನೀಡುವಂತಿಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸರ್ಕಾರಿ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಸ್ಥಳ ಪರಿಶೀಲನೆ ಮಾಡಿ, ನಿಯಮ ಉಲಂಘನೆಯಾಗಿದ್ದರೆ ಅಂತಹ ಪ್ರಯೋಗಾಲಯಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ವರದಿ : ಸಂದೀಪ್ ಎನ್, ದಾವಣಗೆರೆ

error: Content is protected !!