Davanagere

ತ್ರೈಮಾಸಿಕ ಕೆಡಿಪಿ ಸಭೆ ಉತ್ತಮ ಮಳೆ, ಭದ್ರಾ ಭರ್ತಿಗೆ ಕ್ಷಣಗಣನೆ, ಬಿತ್ತನೆ ಬೀಜ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಎಸ್.ಎಸ್.ಎಂ ಸೂಚನೆ

ದಾವಣಗೆರೆ : ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯ ಭರ್ತಿ ಹಂತಕ್ಕೆ ತಲುಪಿದ್ದು ರೈತರಲ್ಲಿ ಆಶಾ ಭಾವನೆಯನ್ನು ಮೂಡಿಸಿದ್ದು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು. ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮೊದಲ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಅಭಿವೃದ್ದಿ ಕೈಗೊಳ್ಳುವಲ್ಲಿ ವಿವಿಧ ಇಲಾಖೆಗಳಿಂದ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ದಾವಣಗೆರೆ ಜಿಲ್ಲೆಯ ಶೇ ೭೦ ರಷ್ಟು ನೀರಾವರಿ ಕಲ್ಪಿಸುವ ಭದ್ರಾ ಜಲಾಶಯ ಭರ್ತಿ ಹಂತಕ್ಕೆ ತಲುಪಿದ್ದರಿಂದ ಭತ್ತ ಹಾಗೂ ಅಡಿಕೆ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಜುಲೈ ೨೯ ರಂದು ನಡೆದ ಕಾಡಾ ಸಭೆಯ ತೀರ್ಮಾನದಂತೆ ಬಲ ಹಾಗೂ ಎಡ ದಂಡೆ ನಾಲೆಗಳಿಗೆ ನೀರು ಬಿಡಲಾಗುತ್ತಿದ್ದು ಭತ್ತದ ಬೀಜ ಚೆಲ್ಲುವಿಕೆಗೆಯನ್ನು ರೈತರು ಕೈಗೊಳ್ಳುವರು. ಜೊತೆಗೆ ನಾಲೆಗೆ ನೀರು ಬಿಟ್ಟಿರುವುದರಿಂದ ಕೆರೆಗಳ ಭರ್ತಿಯಾಗಿ ಅಂತರ್ಜಲ ಹೆಚ್ಚಲಿದೆ. ದಾವಣಗೆರೆ ನಗರದ ಸುತ್ತಲೂ ಕೆರೆಗಳಿರುವುದರಿಂದ ಬೇಸಿಗೆ ಬರಗಾಲದಲ್ಲಿಯು ಕೊಳವೆಬಾವಿಗಳಲ್ಲಿ ನೀರು ಬತ್ತಲಿಲ್ಲ ಎಂದ ಅವರು ದಾವಣಗೆರೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಟಿ.ವಿ.ಸ್ಟೇಷನ್ ಕೆರೆಯು ನಾಲೆಯನ್ನು ಆಶ್ರಯಿಸಿದ್ದು ಇದರಿಂದ ಕೆರೆಗೆ ನೀರು ಬರಲಿದೆ ಎಂದರು.
ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು

error: Content is protected !!