
ನಾವು ಕಾಯುತ್ತಿದ್ದ ಕನಸು ಕೊನೆಗೂ ನನಸಾಗುವ ಕಾಲವು ನಾವು ಕಲಿತ ಶಿಕ್ಷಣದ ಪಾಠಶಾಲೆಯಿಂದ. ಅಂತಹ ಪಾಠಶಾಲೆ ಇಂದು ಅದೆಷ್ಟೋ ಮಹಾನ್ ವ್ಯೆಕ್ತಿಗಳಿಗೆ ಆಶ್ರಯ ತಾಣವಾಗಿ, ಗುರಿ ಮುಟ್ಟಿಸುವ ಗುರುಕುಲವಾಗಿದೆ. ಅಂತಹ ಗುರುಕುಲದ ಮಹಾದ್ವಾರವನ್ನು ನಾನು ನೋಡಿದಾಗ, ನನ್ನ ಅದೃಷ್ಟಕ್ಕೆ ನಾನು ಧನ್ಯವಾದ ಹೇಳಿದಾಗ ಅದು, ಸಹಜವಾಗಿ, ಸಂತೋಷದಿಂದ ಸಂತೋಷಪಟ್ಟಿದ್ದೇನೆ. ನಾನು ಮೊನ್ನೆ ನನ್ನ ಸ್ನೇಹಿತರ ಒಡಗೂಡಿ, ಕೆ.ಆರ್. ರಸ್ತೆಯ ಮುಖ್ಯ ಭಾಗದಲ್ಲಿಯೇ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಡ್ಡರಕೇರಿ ಹಾಗೂ ತರಕಾರಿ ಮಾರ್ಕೆಟ್ ನಲ್ಲಿರುವ ಕೆ.ಆರ್. ಮಾರ್ಕೆಟ್ ಹಿರಿಯ ಪ್ರೌಢ ಶಾಲೆಯ ಗೋಡೆಗಳ ಮತ್ತು ನಾಮಫಲಕಗಳ ಅದ್ಭುತ ನೋಟವನ್ನು ನೋಡಲು, ನನಗೆ ಅದೇನೋ ಕೋಟಿ ನೆನಪುಗಳ ಪುಸ್ತಕವ ಹೊಂದಿರುವ ಗ್ರಂಥಾಲಯವ ಹೊಂದಿತ್ತು.ಅದರಲ್ಲಿ ಕೆಲವು ಸುಂದರ ನೆನಪುಗಳ ನಾನು ನಿಮಗೆ ಹೇಳುತ್ತೇನೆ, ನಾವು-ನೀವು ಎಷ್ಟು ಅದೃಷ್ಟವಂತರು ಎಂದರೆ ನಮ್ಮ ಹಳೆಯ ನೆನಪುಗಳು ಮೆಲುಕು ಹಾಕಿ ಖುಷಿಯ ಜೊತೆ ಕಣ್ಣೀರ ಒರೆಸುವ ಸಂಗತಿಗಳನ್ನು ಸಹ ನಮ್ಮ ಸರ್ಕಾರಿ ಶಾಲೆಗಳು ಮೆಲುಕು ಹಾಕುತ್ತವೆ. ಅಂದು ನಮ್ಮ ಸರ್ಕಾರಿ ಶಾಲೆಗಳ ತರಗತಿಗಳು ತುಂಬಾ ತಂಪಾಗಿವೆ, ಅದು ನಮ್ಮ ಶಾಲೆಗಳಿಗೆ ಸೌಂದರ್ಯವನ್ನು ಸೇರಿಸುತ್ತದೆ! ಮೃದುವಾದ ಹಚ್ಚ ಹಸಿರಿನ ಹುಲ್ಲು, ಅಂದು ನಮ್ಮ ಸ್ನೇಹಿತರ ಜೊತೆಗೆ ಸೇರಿ ಹಾಕಿದ್ದ ಗಿಡ-ಮರಗಳು , ಆ ಗಿಡಗಳಿಗೆ ಈಶ, ಸೊಟ್ಟ ಬಸ್ಯಾ ( ರಘು), ರೇಖಾ, ರಮ್ಯ, ರಶ್ಮೀ, ಇಬ್ರಾಹೀಂ, ಶಶಿ ಜೊತೆ ಜಗಳ ಮಾಡಿಕೊಂಡು, ಕಾಲೆಳೆದುಕೊಂಡು, ಕ್ವಾಟಲೆ-ಕೀಟಲೆ ಮಾಡಿಕೊಂಡು ಹಾಕುತ್ತಿದ್ದ ನೀರಿನ ಜಗಳಗಳು ಇಂದಿಗೂ ನಮ್ಮ ತರಗತಿಯಿಂದ ನೋಡಬಹುದಾಗಿದೆ! ಇದು ನನ್ನನ್ನು ಅಷ್ಟೇ ಕೇವಲ ಭಾವಪರವಶಗೊಳಿಸದೆ, ನನ್ನ ಸ್ನೇಹಿತರೂ ಓದಿದರೆ ನಿಜಕ್ಕೂ ಆನಂದ ಭಾಷ್ಪ ತರಿಸಿಕೊಳ್ಳುವರು, ಅಲ್ಲದೇ ಎಲ್ಲರೂ ಮಿಸ್ ಯೂ ಡಿಯರ್ ಫ್ರೆಂಡ್ಸ್ ಎಂದು ಹೇಳುವರು, ಅಂದು ನಮ್ಮ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ನಾನು ನನ್ನ ಸ್ನೇಹಿತರು ಮತ್ತು ಕೆಲವು ತರಗತಿ ವಿದ್ಯಾರ್ಥಿನಿಯರು ಸೇರಿ ನಮ್ಮ ಅಂದಿನ ಶಿಕ್ಷಕರ ಜೊತೆ ಅದರಲ್ಲೂ ಶೀಲಾ ಮೇಡಮ್, ನಾಗರತ್ನಮ್ಮ, ವೀಣಾ, ತಾರಾ ಟೀಚರ್ ಮತ್ತು ನಮ್ಮ ಮುದ್ದಿನ ಪಿಟಿ ಮಾಸ್ಟರ್ ದೇವೇಂದ್ರಪ್ಪರವರ ಜೊತೆ ಸ್ವಚ್ಚತೆ ಕಾರ್ಯ ಇಂದಿಗೂ ನೆನಪಿದೆ. ಇಂದಿನ ಮೋದಿ ಯವರ ಸ್ವಚ್ಚತೆಯ ಕಾರ್ಯಕ್ರಮ ಸ್ವಚ್ಚ ಭಾರತ್ ಪರಿಕಲ್ಪನೆ ಅಂದೇ ನಮ್ಮ ಬಾಲ್ಯ ಮಿತ್ರರೊಂದಿಗೆ ಕೈ ಜೋಡಿಸಿದ್ದೆವು. ಅಂದು ನಮ್ಮ ಶಿಕ್ಷಕರು ಹೇಳುತ್ತಿದ್ದ ವಿಚಾರಗಳು ಇಂದಿನ ಸ್ವಚ್ಚತೆ ಕೇವಲ ಸುತ್ತಮುತ್ತಲಿನ ಪ್ರದೇಶದ ಸ್ವಚ್ಚತಾ ಅಭಿಯಾನಗಳಿಗೆ ಸೀಮಿತವಾಗದೆ, ಮನಸ್ಸಿನಲ್ಲಿ ಆಲೋಚನೆಗಳಲ್ಲಿ ವ್ಯವಸ್ಥೆಗಳಲ್ಲಿ ಸರ್ಕಾರಿ ಕಛೇರಿಗಳಲ್ಲಿ, ರಾಜಕಾರಣಗಳಲ್ಲಿ ಸ್ವಚ್ಚತೆಯೆಂಬ ನದಿಯೂ ಹರಿಯಬೇಕಾಗಿದೆ. ಈ ಮಾತು ಓದುತ್ತಿರುವ ನಿಮಗೆ ಅದ್ಭುತವೆನಿಸಿದರೆ, ದಯಮಾಡಿ ನಾವು- ನೀವು ಓದಿದ ಸರ್ಕಾರಿ ಶಾಲೆಗಳನ್ನು ಉಳಿಸುವ ಸಣ್ಣ ಪ್ರಯತ್ನ ಮಾಡೋಣ. ಸರ್ಕಾರಿ ಶಾಲೆಗಳು ಜೇನುಗೂಡಿನ ಆಕಾರದಲ್ಲಿದ್ದು, ನಾವು ನೀವು ಒಟ್ಟಿಗೆ ಇದ್ದೂ ಬಾಳಿದರೆ ಸುಂದರವಾಗಿ ಜೇನುಗೂಡು ಕಾಣುತ್ತೆ, ಬಿಟ್ಟರೆ ಸರ್ಕಾರಿ ಶಾಲೆಗಳು ಜೇನುಗೂಡಿನಲ್ಲಿ ಮೂಡುವ ಕೊನೆಯ ಮುಳ್ಳುಗಳಾಗಿ ಪಾಳು ಬಿದ್ದ ಗೋಡೆಗಳಾಗಿ ಕಾಣುತ್ತವೆ. , ನಮ್ಮ ಶಿಕ್ಷಕರು ಅವರ ಕನಸುಗಳನ್ನು ಜೀವಂತವಾಗಿಸಿ ನಮ್ಮಲ್ಲಿ ನೋಡುತ್ತಿದ್ದರು. ಇಲ್ಲಿ ಅಧ್ಯಯನ ಮಾಡುವುದರಿಂದ ನಮಗೆ ಸಕಾರಾತ್ಮಕ ಭಾವನೆ ಬರುತ್ತದೆ, ನಾವು ಆನಂದಮಯ ಸ್ವರ್ಗದಲ್ಲಿದ್ದಂತೆ! ಅಂದು ಈ ಶಾಲೆಗಳಲ್ಲಿ ನಾನು, ನಮ್ಮ ತಂದೆ, ನಮ್ಮ ತಂಗಿಯರು ಸೇರಿ ಎಸ್ ನಿಜಲಿಂಗಪ್ಪನವರಂತಹ ಮೇರು ವ್ಯೆಕ್ತಿಗಳೂ ಸಹ ಶಿಕ್ಷಣ ಕಲಿತಿದ್ದಾರೆ. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಶ್ರೇಷ್ಠ ನಾಯಕರುಗಳಾಗಿದ್ದಾರೆ. ಆದರೆ ಇಂದು ಅಂತಹ ವ್ಯೆಕ್ತಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಪ್ರಿಯ ಓದುಗ ಸ್ನೇಹಿತರೆ, ಇಂದು ನಮ್ಮ ಶಾಲೆಗಳ ಸ್ಥಿತಿ ನೋಡಿದರೆ ನಮ್ಮ ಶಾಲಗೆಳ ನಾಮಫಲಕದ ಜೊತೆ ನಮ್ಮ ನೆನಪುಗಳು ಸಹ ಮರೆಯಾಗುತ್ತವೆಯೇ ಎಂಬ ಭಯ ಕಾಡುತ್ತಿವೆ. ಕಾರಣ ಅಂದು ಶಿಕ್ಷೆಯ ಮೂಲಕ ಒಳ್ಳೆಯ ಪಾಠವ ಹೇಳುತ್ತಿದ್ದ ಶಿಕ್ಷಕರು ಇಂದಿನ ಮಕ್ಕಳಿಗೆ ಪಾಠವ ಹೇಳುವಲ್ಲಿ ಭಯ ಪಡುತ್ತಿದ್ದಾರೆ. ಕಾರಣ ಹೊಸ ಹೊಸ ನಿಯಮಗಳು ಶಿಕ್ಷಣ ಇಲಾಖೆಯ ಮತ್ತು ರಾಜಕಾರಣಿಗಳ ನಿಯಮ ಬದಲಾವಣೆಗಳು ಶಾಲೆಯಲ್ಲಿರಬೇಕಾಗಿದ್ದ ಭಾವೈಕ್ಯತೆಯ ಪಾಠಗಳು ಇಂದು ಮರೆಯಾಗಿ ಕೋಮುಗಲಭೆಗಳ ಧ್ವಂಧಗಳೇ ಹೆಚ್ಚಾಗಿವೆ. ಶಿಕ್ಷೆಯ ಮೂಲಕ ನಮ್ಮ ಗುರುಗಳು ಪಾಠ ಕಲಿಸುವರು ಎಂದರೆ ಮುಟ್ಟಾಳ ಪೋಷಕರ ವರ್ತನೆಗಳಿಂದ ಕಲಿಕೆಯಲ್ಲಿ ಕುಂಠಿತಗೊಂಡಿವೆ. ಶಾಲೆಯ ಮುಂದೆ ಸ್ವಚ್ಚತೆ ಮಾಡುವವರಿಲ್ಲದೆ, ಗಿಡ ಮರಗಳ ಬೆಳಸುವವರಿಲ್ಲದೆ, ಶಿಕ್ಷಕರ ಮಾತುಗಳನ್ನು ಪಾಲಿಸುವವರಿಲ್ಲದೆ ಸಮಾಜಕ್ಕೆ ಹೊರೆಯಾಗುತ್ತಿರುವ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಇಂದು ಅದೇಷ್ಟೋ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. 2018ರಲ್ಲಿಯೇ ಡೆಕ್ಕಾನ್ ಹೆರಾಲ್ಡ್ ದಿನಪತ್ರಿಕೆಯಲ್ಲಿ ಒಟ್ಟು ಸರಿ ಸುಮಾರು 30-50 ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿರುವುದನ್ನು ವರದಿ ಮಾಡಿತ್ತು. ಇದೇ ರೀತಿ ಒಂದೊಂದೇ ಶಾಲೆಗಳನ್ನು ಮುಚ್ಚಿದರೆ ಮುಂದೊಂದು ದಿನ ಅವಕಾಶವಂಚಿತರ ಮಕ್ಕಳಿಗೆ ಮತ್ತು ಬಡಪಾಯಿ ಪೋಷಕರ ಮಕ್ಕಳ ಬದುಕು-ಭವಿಷ್ಯದ ಬಾಗಿಲು ಮುಚ್ಚಿ ಹೋಗುತ್ತದೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ನಾವು- ನೀವೂ ಶ್ರಮ ಪಡೆಯಬೇಕಿದೆ. ಇನ್ನು ಕೊನೆಯದಾಗಿ ಹೇಳುವುದೇನೆಂದರೆ ಹೆಣ್ಣುಮಕ್ಕಳು ಸಮಾಜಕ್ಕೆ, ಮನೆಗೆ ಪುರುಷನಿಗೆ ಹೊರೆ ಎಂದು ಭಾವಿಸುವ ಬದಲು ಹೆಣ್ಣು ಮನೆಯ ಹೊರಗೆ-ಒಳಗೆ ಜವಾಬ್ದಾರಿಯನ್ನು ಹೊತ್ತು ಸಮಾಜದ ಬದಲಾವಣೆಗೆ ನೇರ ಪಾಲುದಾರರಳಾಗಿರುವ ಹೆಣ್ಣನ್ನು ಗೌರವಿಸಿ, ಹೆಣ್ಣುಮಕ್ಕಳಿಗೆ ಶಿಕ್ಷಣ ಕಲಿಸಲು ಪ್ರೋತ್ಸಾಯಿಸಿ ಎಂಬುದೇ ನನ್ನಯ ಆಶಯ.
ಲೇಖನ : ಸೂರ್ಯಪ್ರಕಾಶ್.ಆರ್, ಸಂಪಾದಕರು