ನಗರಸಭೆ ಕಸದ ವಾಹನದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಿ ಸೊಳ್ಳೆ ತಾಣ ನಾಶ ಮಾಡಿ, ಡೆಂಗ್ಯೂ ನಿಯಂತ್ರಿಸಿ -ನಗರಸಭೆ ಪೌರಾಯುಕ್ತೆ ಎಂ.ರೇಣುಕಾ

ಚಿತ್ರದುರ್ಗ: ಸಾರ್ವಜನಿಕರು ಮಾನವ ನಿರ್ಮಿತ ಸೊಳ್ಳೆ ತಾಣ ನಾಶ ಮಾಡಿ, ಘನತ್ಯಾಜ್ಯವನ್ನು ನಗರಸಭೆ ಕಸದ ವಾಹನದಲ್ಲಿ ವಿಲೇವಾರಿ ಮಾಡಬೇಕು. ಸೊಳ್ಳೆ ತಾಣ ನಾಶ ಮಾಡಿ ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದರು. ಇಲ್ಲಿನ ನೆಹರು ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಚೇಳುಗುಡ್ಡ, ಮುನಾವರ್ ಮಸೀದಿ, ವಾರ್ಡ್ ನಂಬರ್ 10 ಮತ್ತು 11ನೇ ವಾರ್ಡ್ ಡೆಂಗ್ಯೂ ಹಾಟ್ಸ್ಪಾಟ್ ಎಂದು ಗುರುತಿಸಿ, ಆರೋಗ್ಯ ಇಲಾಖೆ, ನಗರಸಭೆ ಸಹಯೋಗದೊಂದಿಗೆ ಗುರುವಾರ ಬೆಳಿಗ್ಗೆ ಮನೆ ಮನೆ ಭೇಟಿ, ಸೊಳ್ಳೆ ಉತ್ಪತ್ತಿ ತಾಣ ನಾಶ, ಜ್ವರ ಸಮೀಕ್ಷೆ ಕಾರ್ಯ 10 ತಂಡಗಳ ರಚನೆ, ಗುಂಪು ಸಭೆ, ಕರಪತ್ರ ವಿತರಣೆ, ಡೆಂಗ್ಯೂ ಪ್ರಕರಣಗಳು ಕಂಡು ಬಂದ ಮನೆಗಳಿಗೆ ಬೇವಿನ ಎಣ್ಣೆ ಬಾಟಲ್ ವಿತರಿಸಿ ಅವರು ಮಾತನಾಡಿದರು.
ಡೆಂಗ್ಯೂ ಹಾಟ್ಸ್ಪಾಟ್ ಎಂದು ಗುರುತಿಸಲಾದ ವಾರ್ಡ್ಗಳಲ್ಲಿ ಸೊಳ್ಳೆ ತಾಣಗಳ ನಾಶ ಮಾಡಲು ಕ್ಷಿಪ್ರ ನಿಘಾವಣ ತಂಡಕ್ಕೆ ತಿಳಿಸಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶಿ ಮಾತನಾಡಿ, ನೀರು ಸಂಗ್ರಹ ಪರಿಕರಗಳನ್ನು ಸ್ವಚ್ಛವಾಗಿ ತೊಳೆದು ನೀರು ಸಂಗ್ರಹಿಸಿ ಮುಚ್ಚಿ ಶೇಖರಿಸಿ. ಸೊಳ್ಳೆ ಪರದೇ ಉಪಯೋಗಿಸಿ. ಮಕ್ಕಳಿಗೆ ವಯೋವೃದ್ಧರು ಹಗಲು ಹೊತ್ತಿನಲ್ಲಿ ಮಲಗುವಾಗ ತುಂಬುತೋಳಿನ ಅಂಗಿ ಧರಿಸಿ ಕೊಬ್ಬರಿ ಎಣ್ಣೆ ಬೇವಿನ ಎಣ್ಣೆ ಮಿಶ್ರಣ ಲೇಪನ ಮಾಡಿಕೊಳ್ಳಿ ಎಂದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಈ ಭಾಗದಲ್ಲಿ ಲಾರ್ವಾ ಸಾಂದ್ರತೆ ಹೆಚ್ಚು ಕಂಡು ಬಂದಿದೆ. ಸೊಳ್ಳೆ ಉತ್ಪತ್ತಿ ತಾಣ ನಾಶ ಮಾಡಿ ಮನೆ ಒಳಾಂಗಣ ಹೊರಾಂಗಣ ಧೂಮಲೀಕರಣ ಮಾಡಲು ಸಾರ್ವಜನಿಕರು ಸಹಕರಿಸಿ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೀಟ ಶಾಸ್ತçಜ್ಞೆ ನಂದಿನಿ ಕಡಿ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎನ್.ಎಸ್.ಮಂಜುನಾಥ, ಬಿ.ಮೂಗಪ್ಪ, ಬಿ.ಜಾನಕಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸುರೇಶ ಬಾಬು, ಗಂಗಾಧರ, ಪ್ರಸನ್ನ, ಗೋಪಾಲ ಕೃಷ್ಣ, ನಗರಸಭೆ ಪರಿಸರ ಇಂಜಿನಿಯರ್ ಜಾಫರ್, ಆರೋಗ್ಯ ನಿರೀಕ್ಷಣಾಧಿಕಾರಿ ನಾಗರಾಜ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಅರುಂಧತಿ, ಆಶಾ ಕಾರ್ಯಕರ್ತೆಯರು ನಾಗರೀಕರು ಭಾಗವಹಿಸಿದ್ದರು. 250 ಮನೆಗಳ ಒಳಾಂಗಣ, ಹೊರಾಂಗಣ ಧೂಮಲೀಕರಣ ನಡೆಸಲಾಯಿತು.
ವರದಿ : ಸಂದೀಪ್ ಎನ್, ದಾವಣಗೆರೆ