“ದೀಪಾವಳಿಯೇ ಹಿಂದೂಡಲ್ಪಟ್ಟಿತೋ!” ಎಂಬಂತೆ ಜಾದೂ ಮಾಡಿದ ದಸರೆಯ “ಶತಲಕ್ಷ ದೀಪೋತ್ಸವ”:

- ಸೀತಾರಾಮ್, ಮೈಸೂರು.

Deepavali

ಈ ಸರತಿಯ ಮೈಸೂರು ದಸರೆಯ ಬಹುವರ್ಣ “ಶತಲಕ್ಷ ದೀಪೋತ್ಸವ”ವನ್ನು ಶತಲಕ್ಷ ರಸಿಕರೇ ಸುಖಿಸಿರಬಹುದು. ನವರಾತ್ರಿ ನೆನಪುಗಳಿಂದ ತೀರ ಕೆರಳಿದ್ದ ನನ್ನ ಮನಸ್ಸನ್ನು ತಣಿಸಲು ನಾನೂ ಆ ಸಮಯ  ಮೂರು ಸಂಜೆಗಳಲ್ಲಿ ಅರಮನೆಯ ಸುತ್ತಮುತ್ತಲ ತಿರುವು-ಮುರುವುಗಳಲ್ಲಿ, ಅಡ್ಡಹಾದಿ-ಉದ್ದಬೀದಿಗಳಲ್ಲಿ, ಬುಗರಿ-ತಿಗರಿಯಂತೆ ಗಿರಗಿರನೆ ತಿರುಗಿದೆ, ಗಿರುಗಟ್ಟೆಯಾದೆ, ಕಾಲಿಗೆ ಗಾಲಿ ಕಟ್ಟಿದ್ದಂತೆ ಇರುಳಲ್ಲಿ ತಿರುಳು ಕಾಣಲು ಉರುಳಾಡಿದೆ. ದಸರೆಯ ಥಳಕು-ಬೆಳಕು, ಸದ್ದು-ಗದ್ದಲ, ಗಂಧ-ಗಾಳಿ, ಧೂಳು-ಧೂಮ ಎಲ್ಲದರ ಆಳ-ಅಗಲಕ್ಕೂ ಮಿಂದೆ, ಮುಳುಗಿದೆ, ಒದ್ದಾಡಿ ಎದ್ದೋಡಿದೆ.

ಬಲು ವಿಚಿತ್ರ ಬಲೂನ್‌ಗಳನ್ನು ಸನಿಹದಿಂದ ಕಂಡೇ ಉಬ್ಬಿದೆ; ನವೀನ ಪೀಳಿಗೆಗಳ ಪೀಪಿಗಳಿಗೆ ಕಿವಿಗೊಟ್ಟೇ ‘ಊದಿ’ದೆ. ನನ್ನ ಒಡಲಿನಾಳದಲ್ಲೆಲ್ಲೋ ಕುಟುಕುಜೀವಿಯಾಗಿ ಬಂಡತನದಿಂದ (ಇನ್ನೂ) ಅಂಟಿಕೊಂಡಿರಬಹುದಾದ “ಬಾಲಕ”ನು ಈ ಎಲ್ಲ ಮೋಜು-ಮಸ್ತಿಯನ್ನು ಚಪ್ಪರಿಸುತ್ತ ಚಪ್ಪಾಳೆ ತಟ್ಟಿದನು, ಸಿಳ್ಳೆಯನ್ನೇ ಹೊಡೆದನು, ಹಿರಿಹಿಗ್ಗಿದನು; ದಸರೆಯ ಉಸಿರಾಡುತ್ತ,  ಮೈಸೂರಿನ ಹಿರಿಮೆಯನ್ನು ಹೀರುತ್ತ ಹೀರೆಕಾಯಿ ಬೋಂಡವಾದನು.

ನನ್ನ ಚಿತ್ತಕೋಶದೊಳಗೆ ಚೊಕ್ಕವಾಗಿ, ಚಿರವಾಗಿ ಚಿತ್ರಿತವಾಗಿರುವ ಚಮತ್ಕಾರಗಳಲ್ಲೊಂದು, ಆ ಯುಗದ ವಿದ್ಯುದ್ದೀಪಗಳ ಉಜ್ಜ್ವಲತೆಯಲ್ಲಿ ರಾತ್ರಿ ವೇಳೆ ಗಜಗಾಮಿನಿಯಂತೆ ಸಾಗಿ ಬರುತ್ತಿದ್ದ “ವಾಪಸ್ ಜಂಬೂಸವಾರಿ”; ಅದು ಚೆಲ್ಲುತ್ತಿದ್ದ ಬೇರೆಯದೇ ಚೆಂದದ ಚೆಲುವು (‘ನಿಶಾಕಾಂತಿ’). ಹಾಗಾಗಿ, ಅದರ ನೆನಪಿನಲ್ಲಿ ನಾನು ಈ ವಿಜಯದಶಮಿಯ ರಾತ್ರಿ, ದೃಢ ಸಂಕಲ್ಪದಿಂದ, ಹೆಚ್ಚು-ಕಮ್ಮಿ ಅದೇ ಹಳೇ ಹಾದಿಗಳಲ್ಲಿ, ಹೊಮ್ಮಿ ಹರಿಯುತ್ತಿದ್ದ ಜನಸಾಗರದೊಳಗೆ ಹಾದು, ಹಾಗೆಯೇ ಕರಗಿ-ಕರಗಿ ನೀರಾಗಿಹೋದೆ. ಸಾಲುಮರಗಳ ಕೆಳಗೆ, ಕಾರಂಜಿಗಳ  ಒಳಗೆ, ಪ್ರಮುಖ ವೃತ್ತಗಳ ಸುತ್ತ, ಪ್ರಸಿದ್ಧ ಪ್ರತಿಮೆಗಳ ಮೇಲೆ, ಮತ್ತು ನಾಡಿನ ಹೆಮ್ಮೆಯ ವ್ಯಕ್ತಿಗಳು, ಹೆಗ್ಗುರುತಿನ ಕಟ್ಟಡಗಳ ವಿಶೇಷ ಪ್ರತಿಕೃತಿಗಳಿಗೆ ತೂಗುಬಿಟ್ಟಿದ್ದ ರಂಗುರಂಗಿನ ದೀಪಮಾಲೆಗಳ, ಜ್ಯೋತಿಕಲಶಗಳ ಮೆರುಗಿನಿಂದ ಬೆರಗಾಗಿಹೋದೆ, ಅರಗಿನಂತೆ ಕರಗಿಯೇ ಹೋದೆ. ಅಂದಿನ ಮಧ್ಯಾಹ್ನದ ಸವಾರಿಯಲ್ಲಿದ್ದ ಕೆಲವು (ಹಗಲು)ವೇಷಧಾರಿಗಳು ರಾತ್ರಿಯಲ್ಲಿ ಬಸವಳಿದು ಬರಿಗಾಲಲ್ಲಿ ಮರಳುತ್ತಿದ್ದಾಗ, ಮಂದಿ ಅವರನ್ನು ಮುತ್ತಿ “selfie ‘ಕೀಳು’ತ್ತಿದ್ದುದು” ನನ್ನಲ್ಲಿ ಮಾರುದ್ದ ಮಂದಹಾಸವಂ ಮೂಡಿಸಿತು.

ಇದಲ್ಲದೆ, ಕೆಲವು ಖಾಸಗಿ ‘ಬೊಂಬಾಟ್’ ಬೊಂಬೆ ಪ್ರದರ್ಶನಗಳನ್ನು ಕಣ್ಣಲ್ಲಿ ಕಣ್ಣಿಟ್ಟು, ಕಣ್‌ಕಣ್ ಬಿಟ್ಟು, ಕಣ್-ಸೋಲುವವರೆಗೂ ದಿಟ್ಟಿಸಿ, ಕುಂದುತ್ತಿರುವ ನನ್ನ ಕಂಗಳನ್ನು ಕಾಮನಬಿಲ್ಲಿಗೇ (“Common Billಉ”) ಹೂಡಿದೆ; ಕಣ್ಣುಗಳಿಗೂ ಒಂದು ನಮೂನೆಯ ನವರಾತ್ರಿ ಹಬ್ಬವೇ ದಕ್ಕಿತು. ಬಾಯಿಯಂತೂ “ಬೊಂಬೆ ಬಾಯಿ” ಮಾದರಿ ಮೂಕಾಯಿತು .

ರಾಜರ ಆ ಕಾಲಮಾನದ ದಸರೆಯು ಒಂದು  ಮಾಟದ್ದಾಗಿತ್ತೆಂದರೆ, ಜನಪದದ ಈ ದಿನಗಳ ದಸರೆಯು ಬೇರೆಯದೇ ಮಾಟದ್ದಾಗಿದೆ ಎಂಬುದು ದಿಟವೇ. ಆದರೂ, “ಮೈಸೂರು ಮಾಯೆ”ಗೆ ಮರುಳಾಗಿ, “Mysore, My Soul” ಎಂದು ಕೇಕೆ ಹಾಕುವ ನನ್ನ ನೋಟಕ್ಕಂತೂ, ಎರಡು ರೂಪಗಳಲ್ಲೂ ಕಾಣಸಿಕ್ಕಿದ್ದು ಶುದ್ಧ ಸೊಬಗು-ಸೋಜಿಗ, ಒನಪು-ಒಯ್ಯಾರ, ಅಂದ-ಚೆಂದವೇ!

ಅಮ್ಮಮ್ಮಾ, ಎಷ್ಟುದ್ದ ಸುಂದರ, ’ಎಷ್ಟೊಂದು’ ಮಧುರ, ‘ಎಷ್ಟೆರಡು’ ಮನೋಹರ, ‘ಎಷ್ಟಡಿ’ ರುಚಿರ!!! ನಿಂ- ನಂ ಮೈಸ್ಸುರ್ರು ದ್ದಸ್ಸರ್ರಾ!!!!

ನನ್ನ ದೀಪವತ್ತಾದ ದಸರಾನುಭವವನ್ನು ನಿಮ್ಮಲ್ಲಿ ‘ತೋಡಿ‘ಕೊಳ್ಳಲೋಸುಗ ’ದೀಪಕ್-ತೋಡಿ’ ವಿಲಕ್ಷಣ ರಾಗವನ್ನು ಈವರೆಗೂ ಆಲಾಪ ಮಾಡಿಯಾದ ಮೇಲೆ, ಅದೂ ದೀಪಾವಳಿಯು ಇನ್ನು ಒಂದೇ ವಾರ ಇರುವಾಗ, ಆ ಹಬ್ಬಮಾಲೆಯ ಹಾರೈಕೆಗಳನ್ನೂ ಇದೋ ನಿಮಗೆ ಒಪ್ಪಿಸಿಯೇ ಬಿಡುತ್ತೇನೆ:
ಜ್ಯೋತಿಯಾಗಿ ಬೆಳಕನ್ನು ಬೀರುವಂತೆ, ಸುತ್ತಮುತ್ತಲಿಂದ ಬರುವ ಬೆಳಕನ್ನೂ ಮರುಹೊಳಪಿಸುವಂತೆ, ಮತ್ತು ಈ ಪರಿಯಲ್ಲಿ ಸದಾ ಸಂತಸದಲ್ಲಿರುವಂತೆ, ಈ ದೀಪಾವಳಿಯು ನಿಮಗೆ ನವಚೇತನವನ್ನೀಯಲಿ!
ಅಕ್ಕರೆಯುಳ್ಳ,
“ದಸರಾ-ರಥ” ರಾಮ, ನವರಾತ್ರೀಶ್ವರ ನಗರ.
* “ರಾಟವಾಳ” ಎಂಬುದೇ ನನ್ನ ಬಾಲಕಾಂಡದ “giant wheel” (“ಜಯಂತ ಚಕ್ರ”); “roller coaster” ಏನು ಬೇರೆಯೇ?
ಅದೂ ಅದೇ ‘ರಾಟೆ-ತೊಟ್ಟಿಲೇ’!
* ಆ ಕಾಲದ ಮೈಸೂರಿನ “ಯಜ್ಜಾಮಿಸನ್ನು” (“exhibition”) ಬಗೆಗೂ ಹೀಗೆಯೇ ಒಂದು (sparrow-gauge) “ರೈಲು ಬಿಡಬೇಕೆಂದು” ಈಗ ಮನದಲ್ಲಿ “ಲಹರಿ” ಏಳುತ್ತಿದೆ!
error: Content is protected !!