Tumkur

ಆಸ್ತಿಗಾಗಿ ಜೀವಂತವಾಗಿರುವ ಅಜ್ಜಿ ಹೆಸರಲ್ಲಿ ಮರಣ ಪ್ರಮಾಣಪತ್ರ ಸೃಷ್ಟಿ

ಚಿಕ್ಕಮಗಳೂರಿನಲ್ಲೊಂದು ನಕಲಿ ಮರಣ ಪ್ರಮಾಣಪತ್ರ ಮಾಡಿಸಿರುವ ಪಿಡಿಓ, ತಾಲ್ಲೂಕು ತಹಸೀಲ್ದಾರ್ ಸಿಬ್ಬಂಧಿಗಳು

ಚಿಕ್ಕಮಗಳೂರಿನಲ್ಲಿ ಆಸ್ತಿಗಾಗಿ ಮೊಮ್ಮಕ್ಕಳು ತಮ್ಮ ಅಜ್ಜಿ ಜೀವಂತವಾಗಿರುವಾಗಲೇ ಮರಣ ಪ್ರಮಾಣಪತ್ರ ಮಾಡಿಸಿ ಆಸ್ತಿ ಕಬಳಿಸಿದ್ದಾರೆ. ಸರ್ಕಾರಿ ದಾಖಲೆಗಳಲ್ಲಿ ಅಜ್ಜಿ ಸತ್ತಿದ್ದಾರೆ ಎಂದು ದಾಖಲಿಸಿ, ಅಕೆಯನ್ನು ಆಸ್ತಿಯಿಂದ ವಂಚಿತಳನ್ನಾಗಿ ಮಾಡಿದ್ದಾರೆ. ಇದರಿಂದಾಗಿ ಅಜ್ಜಿ ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ.
ಕಾಫಿನಾಡಿನಲ್ಲಿ ಆಸ್ತಿಗಾಗಿ ಬದುಕಿರುವ ಅಜ್ಜಿಯನ್ನೇ ಮೊಮ್ಮಕ್ಕಳು ಸಾಯಿಸಿದ್ದಾರೆ. ಅಯ್ಯೋ ನೀವೇನು ಅಪಾರ್ಥ ಮಾಡಿಕೊಳ್ಳಬೇಡಿ, ಇವರೇನು ಅಜ್ಜಿಯನ್ನು ಕೊಲೆ ಮಾಡಿ ಕ್ರಿಮಿನಲ್ ಅಪರಾಧ ಮಾಡಿಲ್ಲ. ಸರ್ಕಾರಿ ದಾಖಲೆಗಳಲ್ಲಿ ತಮ್ಮ ಅಜ್ಜಿ ಸತ್ತೇ ಹೋಗಿದ್ದಾಳೆ ಎಂದು ದಾಖಲೆ ಮಾಡಿಸಿದ್ದಾರೆ. ಈ ಮೂಲಕ ಅಜ್ಜಿ ಜೀವಂತವಾಗಿರುವಾಗಲೇ ಅವರ ಹೆಸರಿನಲ್ಲಿ ಮರಣ ಪ್ರಮಾಣ ಪತ್ರವನ್ನು ಮಾಡಿಸಿಕೊಂಡು ಅವರ ಹೆಸರಲ್ಲಿದ್ದ ಎಲ್ಲ ಆಸ್ತಿಯನ್ನು ಮೊಮ್ಮಕ್ಕಳು ಹಂಚಿಕೆ ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಣಸಾಗರ ಗ್ರಾಮದ ಗಂಗಮ್ಮ ತನ್ನದೇ ಮನೆ ಮುಂದೆ ತಾನೇ ನಿರ್ಗತಿಕಳಂತೆ ಬಿಳುವ ದುಸ್ಥಿತಿ ನಿರ್ಮಾಣವಾಗಿದೆ. ಮೂವರು ಹೆಣ್ಣು ಮಕ್ಕಳು ಓರ್ವ ಗಂಡು ಮಗನಿದ್ದರೂ ವೃದ್ಧೆಯ ಅನಾಥವಾಗಿ ಜೀವನ ಮಾಡುವಂತಾಗಿದೆ. ಇನ್ನು ಕೈತುಂಬಾ ಆಸ್ತಿ ಇದ್ದರೂ ಅದನ್ನು ಅನುಭವಿಸಲೂ ಅಧಿಕಾರ ಇಲ್ಲದಂತೆ ಮಾಡಿದ ಗಂಡನ ಅಣ್ಣ ಭಾವ ಹಾಗೂ ಭಾವನ ಮಕ್ಕಳು ಅಜ್ಜಿಯ ಪಾಲಿಗೆ ವಿಲನ್ ಆಗಿದ್ದಾರೆ. ಇದೀಗ ಅಜ್ಜಿ ತುಂಡು ಭೂಮಿಯೂ ಇಲ್ಲದೇ, ತಾನು ಬುದುಕಿದ್ದೇನೆ ಸವಲತ್ತು ಕೊಡಿ ಎಂದು ಸರ್ಕಾರಕ್ಕೂ ಕೇಳಲಾಗದೇ ಬದುಕಿದ್ದೂ ಸತ್ತಂತಾಗಿದ್ದಾರೆ. ಇನ್ನು ಗಂಗಮ್ಮನ ಜೊತೆಗೆ ಆಕೆಯ ಮಕ್ಕಳು ಕೂಡ ಬಡತನದ ಜೀವನ ಸಾಗಿಸುತ್ತಿದ್ದಾರೆ. ಸುಖವಾಗಿ ಸಾಕಿ ಸಲುಹಬಹುದಿತ್ತು. ಆದರೆ, ಗಂಗಮ್ಮನ ಪಾಲಿಗೆ ಬರಬೇಕಿದ್ದ 11 ಎಕರೆ ಜಮೀನನ್ನು ಭಾಗ ಮಾಡಿದ ನತರ ಕೊಡುವುದಾಗಿ ಗಂಡನ ಮನೆಯವರು ಹೇಳಿದರು
ಗಂಡನಿಲ್ಲದ ಮನೆಯಲ್ಲಿ ನಾನೂ ಇರುವುದು ಬೇಡವೆಂದು ಹೊರಗೆ ಬಂದು ಮಕ್ಕಳನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದ ಗಂಗಮ್ಮನಿಗೆ ತನ್ನ ಗಂಡನ ಆಸ್ತಿ ಸಿಕ್ಕು ನನ್ನ ಮಕ್ಕಳಿಗೂ ಉತ್ತಮ ಭವಿಷ್ಯ ಸಿಗುತ್ತದೆ ಎಂಬ ಕನಸು ಕಾಣುತ್ತಿದ್ದಳು. ಆದರೆ, ಈ ಗಂಗಮ್ಮನ ಕನಸಿಗೆ ಸ್ವತಃ ಅವರ ಗಂಡನ ಅಣ್ಣ ಹಾಗೂ ಅವರ ಮಕ್ಕಳು ಕೊಳ್ಳಿ ಇಟ್ಟಿದ್ದಾರೆ. ಗಂಗಮ್ಮನೂ ಸತ್ತು ಹೋಗಿದ್ದಾಳೆಂದು ಸರ್ಕಾರಿ ನಕಲಿ ದಾಖಲೆಗಳನ್ನು ಮಾಡಿಸಿ, ಅವರಿಗೆ ಬರಬೇಕಿದ್ದ 11 ಎಕರೆ ಭೂಮಿಯನ್ನು ಕಬಳಿಸಿ, ಪೂರ್ಣವಾಗಿ ಬೀದಿಗೆ ತಳ್ಳಿದ್ದಾರೆ. ಇದೀಗ ಆಸ್ತಿ ಕೇಳಲು ಮಕ್ಕಳನ್ನು ಕರೆದುಕೊಂಡು ಹೋದರೆ, ಇಡೀ ಕುಟುಂಬದ ಎಲ್ಲ ಸದಸ್ಯರನ್ನೂ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನನ್ನ ಪಾಲಿಗೆ ಬರಬೇಕಿದ್ದ ಗಂಡನ ಆಸ್ತಿ ಕಿತ್ತುಕೊಂಡಿರುವುದನ್ನು ಪ್ರಶ್ನೆ ಮಾಡಿದರೆ, ನೀನು ಈಗಾಗಲೇ ನಮ್ಮ ಮನೆಯ ಪಾಲಿಗೆ ಸತ್ತು ಹೋಗಿದ್ದೀಯ. ನಿನಗೆ ಆಸ್ತಿ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಊರಿನ ಗ್ರಾಮಸ್ಥರ ಸಹಾಯದಿಂದ ಪೊಲೀಸ್ ಠಾಣೆಗೆ ದೂರು ಕೊಟ್ಟಿರುವ ಅಜ್ಜಿ ಗಂಗಮ್ಮ, ಅದರ ಪ್ರತಿಯನ್ನು ಹಿಡಿದು ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ, ಸರ್ಕಾರಿ ಕಚೇರಿಗಳಲ್ಲಿ ಈಗಾಗಲೇ ನಿಮ್ಮ ಗಂಡ ಹಾಗೂ ನೀವು ಇಬ್ಬರೂ ಸತ್ತು ಹೋಗಿದ್ದಾಗಿ ವಂಶವೃಕ್ಷದಲ್ಲಿ ತಿಳಿಸಿದ್ದು, ನಿಮ್ಮ ಮರಣ ಪ್ರಮಾಣ ಪತ್ರವೂ ಇದೆ ಎಂದು ತೋರಿಸಿದ್ದಾರೆ. ಇದೀಗ ಆಸ್ತಿಯ ದಾಖಲೆ ಪಹಣಿಯಲ್ಲಿಯೂ ನಿಮ್ಮ ಹೆಸರು ಬಿಟ್ಟು ಉಳಿದಂತೆ ನಿಮ್ಮ ಗಂಡನ ಅಣ್ಣಂದಿರ ಮಕ್ಕಳು ಹೆಸರನ್ನು ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದೀಗ, ಅಜ್ಜಿ ಗಂಗಮ್ಮ ನಾನು ಬದುಕಿದ್ದೇನೆ ಸ್ವಾಮೀ ಎಂದು ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗಳಿಗೆ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ

error: Content is protected !!