ಸರ್ಕಾರಿ ಜಿಲ್ಲಾ ಆಸ್ಪತ್ರೆಯ ರಕ್ತಪರೀಕ್ಷಾ ವಿಭಾಗದಲ್ಲಿ ಸ್ಥಳಾವಕಾಶವಿಲ್ಲದೆ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ

ಚಿತ್ರದುರ್ಗ: ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ, ರಕ್ತಪರೀಕ್ಷಾ ವಿಭಾಗದಲ್ಲಿ ಸ್ಥಳಾವಕಾಶ ಕಡಿಮೆಯಾಗಿ, ಜನರಿಗೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಸಹ ಕಷ್ಟಕರವಾಗಿದ್ದು, ನೂಕುನುಗಲಿನಲ್ಲಿ ನುಗ್ಗಿ, ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಕ್ತ ಪರೀಕ್ಷಾ ವಿಭಾಗದ ಬಾಗಿಲು ಕಿರಿದಾಗಿದ್ದು, ರೋಗಿಗಳು ಒಳ ಹೋಗಿ ರಕ್ತ ನೀಡುವುದು ಸಹ ಕಷ್ಟಕರವಾಗಿದೆ. ಕಬ್ಬಿಣದ ಕಂಬಿಯ ತಡೆ ಗೋಡೆಯನ್ನ ಮಾಡಿರುವುದರಿಂದ, ಜನರು ಒಳ ಹೋಗಿ ಪರೀಕ್ಷಾ ಸ್ಯಾಂಪಲ್‌ಗಳನ್ನು ನೀಡಲು ನುಗ್ಗಾಟವಾಗುವ ದೃಶ್ಯ ಸಾಮಾನ್ಯವಾಗಿದೆ. ಸೋಮವಾರವಂತೂ ಗ್ರಾಮೀಣ ಜನರು ಹೆಚ್ಚು ಬರುತ್ತಿದ್ದು, ರೋಗಿಗಳಿಗೆ ಸ್ಥಳವಕಾಶವಿಲ್ಲದೇ ದಾರಿಗೆ ಅಡ್ಡ ನಿಂತಿರುತ್ತಾರೆ. ಆಸ್ಪತ್ರೆಯ ಆಡಳಿತ ಮಂಡಳಿಯವರು ಇತ್ತಕಡೆ ಗಮನ ಹರಿಸಿ, ಜನರಿಗೆ ಸುಗಮವಾಗಿ ರಕ್ತಪರೀಕ್ಷೆ ಮಾಡಿಸಿಕೊಂಡು, ಅವುಗಳ ರಿಪೋರ್ಟ್‌ಗಳನ್ನು ಪಡೆದು ಹೊರ ಹೋಗುವಂತಹ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ವಿನಂತಿಸಿಕೊಂಡಿದ್ದಾರೆ.
ಈಗೀಗ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಮಳೆಗಾಲದ ಜ್ವರ, ಮೈ ಕೈ ನೋವು, ಇನ್ನಿತರ ರೋಗಗಳಿಗೆ ರಕ್ತ ಪರೀಕ್ಷೆಯ ಸಂಖ್ಯೆ ಹೆಚ್ಚಾಗುತ್ತಿದ್ದು, ಡೆಂಗ್ಯು ಸಹ ಚಿತ್ರದುರ್ಗದಲ್ಲಿ ಹೆಚ್ಚಿನ ಮಟ್ಟದ ಗಂಡಾಂತರವನ್ನು ಉಂಟು ಮಾಡುತ್ತಿದ್ದು, ಅಂತಹ ರೋಗಿಗಳಿಗೆ ರಕ್ತಪರೀಕ್ಷೆ ಸಾಮಾನ್ಯವಾಗುತ್ತಿದೆ, ಆಸ್ಪತ್ರೆ ಹಿಂಭಾಗದಲ್ಲಿರುವ ರಕ್ತ ಪರೀಕ್ಷಾ ವಿಭಾಗಕ್ಕೆ ಬಂದಾಗ, ಕೊಠಡಿಯ ವಿಸ್ತೀರ್ಣ ಬಹಳ ಕಡಿಮೆ ಇದ್ದು, ಜನರು ಸರದಿಯಲ್ಲಿ ನಿಂತು, ಒಳ ಹೋಗಿ, ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಕಷ್ಟಕರವಾಗಿದ್ದು, ಇದರ ಬಗ್ಗೆ ಆಸ್ಪತ್ರೆ ಶೀಘ್ರವಾಗಿ ಕ್ರಮ ಜರುಗಿಸಿ, ಜನಸಂಖ್ಯೆ ಆಧಾರದ ಮೇಲೆ ಕೊಠಡಿಗಳ ವಿಸ್ತೀರ್ಣವನ್ನ ನಿರ್ಧರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.