Mysuru

ಚಾಮುಂಡಿಬೆಟ್ಟದಲ್ಲಿ ವೈಭವದ ಚಾಮುಂಡೇಶ್ವರಿ ವರ್ಧಂತಿ

ಮೈಸೂರು: ಜು.೨೮:- ನಾಡದೇವತೆ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಚಿನ್ನದ ಪಲ್ಲಕ್ಕಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿಯ ವೈಭವದ ಮೆರವಣಿಗೆ ಶನಿವಾರ ನೆರವೇರಿತು.
ವಿವಿಧ ಹೂವುಗಳಿಂದ ಅಂಲಕೃತಗೊಂಡ ಸ್ವರ್ಣ ಪಲ್ಲಕ್ಕಿಯಲ್ಲಿ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಯ ಮೆರವಣಿಗೆಗೆ ರಾಜವಂಶಸ್ಥ, ಸಂಸದ ಯದುವೀರ್ ಹಾಗೂ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು. ಈ ವೇಳೆ ಶಾಸಕ ಜಿ.ಟಿ. ದೇವೇಗೌಡ, ಎಡಿಸಿ ಶಿವರಾಜು ಇದ್ದರು.
ಚಾಮುಂಡಿಬೆಟ್ಟದಲ್ಲಿ ಚಿನ್ನದ ಪಲ್ಲಕ್ಕಿ ಉತ್ಸವವವನ್ನು ಸಾವಿರಾರು ಮಂದಿ ಭಕ್ತರು ಕಣ್ತುಂಬಿಕೊಂಡರು. ಆಷಾಢ ಮಾಸದ ಪೂಜೆ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿರುವಂತೆಯೇ ಶನಿವಾರ ಕೂಡ ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದರು. ಬೆಳಗ್ಗೆ ೪ ಗಂಟೆಯಿಂದಲೇ ದೇವಸ್ಥಾನದಲ್ಲಿ ಅನೇಕ ಬಗೆಯ ಪೂಜೆ ನೆರವೇರಿತು. ವರ್ಧಂತಿ ಅಂಗವಾಗಿ ಮೊದಲು ಅಮ್ಮನವರಿಗೆ ಅಭ್ಯಂಜನ ಸ್ನಾನ ಮಾಡಿಸಲಾಯಿತು. ಬಳಿಕ ಅಲಂಕರಿಸಿ ಪೂಜಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿದಂತೆ ವಿವಿಧ ಪೂಜೆ ನೆರವೇರಿಸಲಾಯಿತು. ಬಳಿಕ ಚಳಿ ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶ ನೀಡಲಾಯಿತು. ಈ ನಡುವೆ ಬೆಳಗ್ಗೆ ೯.೩೦ಕ್ಕೆ ಮತ್ತು ಸಂಜೆ ೬.೩೦ ರಿಂದ ೭ ರವರೆಗೆ ತಾಯಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ರಾತ್ರಿ ೯ ಗಂಟೆವರೆಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಅರಮನೆಯಲ್ಲಿ ನಡೆಯುವ ದರ್ಬಾರ್ ಮಾದರಿಯಲ್ಲೇ ವರ್ಧಂತಿ ದಿನ ಅಮ್ಮನವರಿಗೆ ದರ್ಬಾರ್ ಉತ್ಸವ ನೆರವೇರಿಸಲಾಯಿತು.
ರಾಜವಂಶಸ್ಥ ಮತ್ತು ಸಂಸದ ಯದುವೀರ್ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ವರ್ಧಂತಿಗೆ ಚಾಲನೆ ನೀಡಿದರು. ನಂತರ, ತಾಯಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ದೇವಸ್ಥಾನದ ಆವರಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ೧೦.೩೦ಕ್ಕೆ ದೇವಸ್ಥಾನದ ಮುಂಭಾಗದಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಬಳಿಕ ಯದುವೀರ್, ಪ್ರಮೋದಾದೇವಿ ಒಡೆಯರ್, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಪಲ್ಲಕ್ಕಿಯನ್ನು ಎಳೆದರು. ಮೆರವಣಿಗೆ ಆರಂಭವಾಗುತ್ತಿದ್ದಂತೆಯೇ ಭಕ್ತರು ಜೈ ಚಾಮುಂಡೇಶ್ವರಿ ಎಂದು ಜಯಘೋಷ ಕೂಗಿದರು. ಪೊಲೀಸ್ ಬ್ಯಾಂಡ್, ಮಂಗಳವಾದ್ಯ ಸೇರಿದಂತೆ ಛತ್ರಿ, ಚಾಮರಗಳೊಂದಿಗೆ ಉತ್ಸವ ಯಶಸ್ವಿಯಾಗಿ ನೆರವೇರಿತು. ಉತ್ಸವದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.
ಅಶ್ವಾರೋಹಿ ಪಡೆ, ದೇವಸ್ಥಾನದ ಬಿರುದು ಬಾವಲಿ, ಮಂಗಳವಾದ್ಯದವರು ಮಂತ್ರಘೋಷ ಮೊಳಗಿಸಿ ಮುಂದೆ ಸಾಗುತ್ತಿದ್ದರೆ, ಹಿಂದೆ ಚಿನ್ನದ ಪಲ್ಲಕ್ಕಿ ಮೆರವಣಿಗೆ ಹಿಂದೆ ಸಾಗಿತು. ದೇವಸ್ಥಾನದ ಒಂದು ಸುತ್ತುವ ತನಕ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ತಾಯಿ ವರ್ಧಂತಿ ಹಿನ್ನೆಲೆಯಲ್ಲಿ ದೇವಸ್ಥಾನದ ಒಳ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಗುಲಾಬಿ, ಸೇವಂತಿಗೆ, ಚೆಂಡು ಹೂ ಸೇರಿದಂತೆ ವಿವಿಧ ಬಗೆಯ ಹೂ ಗಳಿಂದ ಅಲಂಕರಿಸಲಾಗಿತ್ತು.
ವರ್ಧಂತಿ ಹಿನ್ನೆಲೆಯಲ್ಲಿ ಮೂರು ಆಷಾಢ ಶುಕ್ರವಾರಕ್ಕಿಂತಲೂ ಹೆಚ್ಚಿನ ಜನಸಾಗರವೇ ಹರಿದು ಬಂದಿತು. ಲಲಿತಮಹಲ್ ಪ್ಯಾಲೇಸ್ ಮೈದಾನದಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದ ಸಾರ್ವಜನಿಕರು ಮುಂಜಾನೆ ಎರಡು ಗಂಟೆಯಿಂದಲೇ ಬೆಟ್ಟಕ್ಕೆ ಬರ ತೊಡಗಿದರು. ದೇವರ ದರ್ಶನಕ್ಕೆ ಅವಕಾಶ ಕೊಡುವ ಹೊತ್ತಿಗೆ ಪ್ರವೇಶ ಶುಲ್ಕ ಹಾಗೂ ಉಚಿತ ಪ್ರವೇಶದ ಬ್ಯಾರಿಕೇಡ್ ಗಳಲ್ಲಿ ಸಾಲು ಸಾಲುಗಟ್ಟಿ ನಿಂತಿದ್ದರು.
ಲಲಿತಮಹಲ್ ಅರಮನೆ ಮೈದಾನದಿಂದ ಇದ್ದ ಉಚಿತ ಬಸ್ ಅಲ್ಲದೆ, ನಗರ ಸಾರಿಗೆ ಬಸ್ ನಿಲ್ದಾಣದಿಂದಲೂ ಸಾರ್ವಜನಿಕರು ಬರುತ್ತಿದ್ದರು. ಹಲವು ವರ್ಷದಿಂದ ಬೆಟ್ಟದ ಮೆಟ್ಟಿಲು ಮೂಲಕ ದೇವಸ್ಥಾನ ತಲುಪುವುದು ವಿಶೇಷವಾಗಿತ್ತು.
ಬೆಟ್ಟಕ್ಕೆ ಆಗಮಿಸಿದ ಭಕ್ತರಿಗೆ ಎಂದಿನಂತೆ ಮಲ್ಟಿಲೆವೆಲ್ ಪಾರ್ಕಿಂಗ್ ಜಾಗದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ೭ ರಿಂದ ಪ್ರಾರಂಭವಾದ ಅನ್ನಸಂತರ್ಪಣೆ ರಾತ್ರಿವರೆಗೂ ನಡೆಯಿತು. ಬೆಳಗ್ಗೆ ಪೊಂಗಲ್, ಕೇಸರಿಬಾತ್, ಉಪ್ಪಿಟ್ಟು ವಿತರಿಸಲಾಯಿತು. ಮಧ್ಯಾಹ್ನ ಬಾತ್, ಹೋಳಿಗೆ, ತುಪ್ಪ, ಪಾಯಸ, ಅನ್ನ ಸಾಂಬಾರ್ ಪಲ್ಯ, ಸಂಜೆ ಕೇಸರಿ ಬಾತ್ ಪಲಾವ್ ನೀಡಲಾಯಿತು.
ಪರಂಪರಾನುಗತ ಆಚರಣೆ:
ದೇವರ ಮುಂದೆ ಸಂಸದರಲ್ಲ, ಸದಾ ಮಗನಾಗಿ ಇರುತ್ತಾರೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಹೇಳಿದರು. ವರ್ಧಂತಿ ಮಹೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ಈ ವರ್ಧಂತಿ ಪರಂಪರಾನುಗತವಾಗಿ ನಡೆದುಕೊಂಡು ಬರುತ್ತಿರುವ ಆಚರಣೆ ಈಗಲೂ ಮುಂದುವರಿಯುತ್ತಿದೆ. ತಾಯಿ ಚಾಮುಂಡೇಶ್ವರಿಗೆ ಸೀರೆ ಕೊಟ್ಟ ವಿಚಾರದಲ್ಲಿ ಅಂತದ್ದೇನು ಇಲ್ಲ. ಎಲ್ಲಾ ದೇವಿಯ ಅನುಗ್ರಹ. ಕಳೆದ ಬಾರಿಯೇ ಕೊಡಬೇಕು ಅಂದುಕೊಂಡಿದ್ದೆ. ಕೊಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪ್ರತಿ ವರ್ಷದಂತೆ ಮೂಲ ಮೂರ್ತಿ, ಉತ್ಸವಮೂರ್ತಿ ಎರಡಕ್ಕೂ ಸೀರೆ ನೀಡಿದ್ದೇನೆ ಎಂದರು.
ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಅತಿವೃಷ್ಠಿಯೂ ಬೇಡ, ಅನಾವೃಷ್ಠಿಯೂ ಬೇಡ. ಸಮವೃಷ್ಠಿಯಲ್ಲಿ ಮಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ. ಕೆಆರ್‌ಎಸ್‌ಗೆ ಸಾಕಷ್ಟು ಜನರು ಭೇಟಿ ನೀಡುತ್ತಿದ್ದಾರೆ. ಇದೆಲ್ಲ ಆದ ನಂತರ ನಾನು ಕೂಡ ಭೇಟಿ ನೀಡಿ ಪೂಜೆ ಸಲ್ಲಿಸಿ ಬರುತ್ತೇನೆ ಎಂದು ತಿಳಿಸಿದರು.

error: Content is protected !!